ವೃತ್ತಿ ನೈಪುಣ್ಯತೆ ಹೆಚ್ಚಳಕ್ಕೆ ಮನೆಯಿಂದಲೇ ಕೆಲಸ ಯೋಜನೆಯಿಂದಾದ ಅನುಕೂಲಗಳು
ಉತ್ತಮ ಶಿಕ್ಷಕ ಯಾವಾಗಲೂ ವಿದ್ಯಾರ್ಥಿಯಾಗಿಯೇ ಇರಬೇಕೆಂಬ ಮಾತಿದೆ. ಅದರಂತೆ ಶಿಕ್ಷಕನಾದವನು ಶಾಲಾ ಕರ್ತವ್ಯದಲ್ಲಿಯೇ ಇರಲಿ ಅಥವಾ ರಜಾ ಅವಧಿಯಲ್ಲಿರಲಿ ನಿರಂತರವಾಗಿ ಅಧ್ಯಯನ ಶೀಲನಾಗಿರಬೇಕು. ಪ್ರತಿ ಹಂತದಲ್ಲೂ ಶಿಕ್ಷಕ ಹೊಸತನ್ನು ಕಲಿಯುತ್ತಲೇ ಇರಬೇಕಾಗುತ್ತದೆ. ಆಗ ಮಾತ್ರ ಶಿಕ್ಷಕ ಪರಿಪೂರ್ಣನಾಗಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಸಾಧ್ಯವಾಗುತ್ತದೆ.
ಅಂತೆಯೇ ಶಿಕ್ಷಕ ತನ್ನ ವೃತ್ತಿ ನೈಪುಣ್ಯತೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ನಿರಂತರ ಪಠ್ಯ ಮತ್ತು ಪಠ್ಯಕ್ಕೆ ಪೂರಕವಾದ ವಿಷಯವಸ್ತುವುಳ್ಳ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಅಧ್ಯಯನ ಮಾಡಿರುವುದನ್ನು ಮನನ ಮಾಡಿಕೊಳ್ಳಬೇಕು ನಂತರ ತನ್ನದೇ ಆದ ರೀತಿಯಲ್ಲಿ ವಿಷಯವನ್ನು ಅಭಿವ್ಯಕ್ತಿ ಪಡಿಸುವ ಕೌಶಲವನ್ನೂ ಹೊಂದಬೇಕು. ಮಕ್ಕಳ ಮಟ್ಟಕ್ಕೆ ಚಿಂತಿಸಿ, ಅವರಿಗೆ ಅರ್ಥವಾಗುವಂತೆ ಹೇಳುವ ಸಾಮರ್ಥ್ಯ ಪಡೆಯಬೇಕು.
ಇದರಂತೆ ಲಭ್ಯ ಇರುವ ಹಲವಾರು ಮಕ್ಕಳ ಕಥೆ, ಮಕ್ಕಳಿಗಾಗಿಯೇ ರಚಿಸಿದ ಕಥೆ, ಕವನ ಸಂಕಲನಗಳನ್ನು ಮನೆಯಿಂದಲೇ ಕೆಲಸದ ಅವಧಿಯಲ್ಲಿ ಓದಲಾಯಿತು. ಅಷ್ಟೇ ಅಲ್ಲದೆ ಅವುಗಳ ಕುರಿತಾಗೆ ಪರಾಮರ್ಶಿಸಿ ಲೇಖನವನ್ನು ಬರೆಯಲಾಯಿತು. ಈ ಮುಂಚೆ ಕಲಬುರ್ಗಿ ಆಯುಕ್ತಾಲಯದಿಂದ ನೀಡಿದ ಆರು ಅಂಶಗಳ ಚಟುವಟಿಕೆಯಲ್ಲೂ ಈ ಅಂಶ ಮಹತ್ತರವಾದದ್ದೆನಿಸಿತು. ಮಕ್ಕಳ ಕೃತಿ ಸಂಪುಟ ರಚನೆ, ವ್ಯಕ್ತಿ ಅಧ್ಯಯನ ಮಗುವಿನ ಪೂರ್ವಾಪರ ಹಿನ್ನೆಲೆ ತಿಳಿಯಲಾಯಿತು.
ತರಗತಿಯಲ್ಲಿ ವಿಜ್ಞಾನ ವಿಷಯ ಬೋಧಿಸುವಾಗ, ಮಕ್ಕಳು ಕಲಿಕೆಯಲ್ಲಿ ಎದುರಿಸಬಹುದಾದ ಕ್ಲಿಷ್ಟತೆಗಳನ್ನು ಪಟ್ಟಿ ಮಾಡಿ ಅವುಗಳನ್ನು ನಿವಾರಿಸಲು ನೆರವಾಗುವ ಕಲಿಕೋಪಕರಣಗಳನ್ನು ಹೇಗೆ ತಯಾರಿಸಬಹುದೆಂದು ಆಲೋಚಿಸಿ ಅದಕ್ಕೆ ಸಿದ್ಧತೆ ಮಾಡಿಕೊಳ್ಳಲಾಯಿತು. ಅಲ್ಲದೆ ನೈಜವಾಗಿ ಯಾವ ವಸ್ತುಗಳನ್ನು ಪಾಠಕ್ಕೆ ಬಳಸಬಹುದೆಂದು ಚಿಂತಿಸಲಾಯಿತು.
ಕಲಿಕೆಯಲ್ಲಿ ಮಕ್ಕಳ ಸ್ವ ಕಲಿಕೆಯೂ ಅಷ್ಟೇ ಪ್ರಾಮುಖ್ಯತೆ ಪಡೆಯುವುದರಿಂದ ಅವರಿಗೆ ನೀಡಬಹುದಾದ ಯೋಜನೆಗಳು ಯಾವುವು ಎಂಬುದನ್ನು ಪಟ್ಟಿಮಾಡಿಕೊಂಡು ಅದಕ್ಕೆ ಪೂರಕವಾಗಿ ನಾವೇನು ಒದಗಿಸಬಹುದೆಂದು ಆಲೋಚಿಸಲಾಯಿತು. ಯೋಜನೆಗಾಗಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದೆಂದು ಅಂತರ್ಜಾಲದಲ್ಲಿ ವೀಕ್ಷಿಸಲಾಯಿತು.
ಇಲಾಖೆಯಿಂದ ತೆಗೆದುಕೊಂಡ ಆನ್ಲೈನ್ ತರಬೇತಿಗಳೂ ವೃತ್ತಿಪರತೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಬಹಳ ಸಹಕಾರಿಯಾದವು ಎನ್ನಲು ಹೆಮ್ಮೆ ಎನಿಸುತ್ತದೆ. ಎಲ್ಲ ವಿಷಯಗಳ ಕುರಿತಾಗಿಯೂ ತರಬೇತಿ ಪಡೆದು ಪುನಶ್ಚೇತಗೊಂಡಿದ್ದು ಮುಂದಿನ ಬೋಧನಾ ಸಮಯಕ್ಕೆ ಅನುಕೂಲಕರವಾಗಿದೆ.
ಮುಖ್ಯಗುರುಗಳು ನಿರ್ವಹಿಸಬೇಕಾದ ದಾಖಲೆಗಳು, ಮುಖ್ಯಗುರುಗಳ ಕರ್ತವ್ಯ ಮತ್ತು ಜವಾಬ್ದಾರಿಗಳು, ಶಾಲಾ ನಿರ್ವಹಣೆ, ಶಾಲೆಯ ಆಸ್ತಿ ರಕ್ಷಣೆ ಮುಂತಾದ ಮಾಹಿತಿಗಳನ್ನು ಆನ್ಲೈನ್ ತರಬೇತಿಯಿಂದ ದೊರೆತಿದ್ದು ಶಾಲಾ ಅಭಿವೃದ್ಧಿಗೆ ಸಹಕಾರಿಯಾಗಿದೆ.
ಜೊತೆಗೆ ತಂತ್ರಜ್ಞಾನದ ಮುನ್ನಡೆ ,ಪ್ರತಿಯೊಬ್ಬರೂ ವೃತ್ತಿ ಕೌಶಲವನ್ನು ಹೆಚ್ಚಿಸಿಕೊಳ್ಳುವಂತೆ ಮಾಡಿದೆ. ೪ ಮತ್ತು ೫ ನೇ ತರಗತಿಯ ಕನ್ನಡ ವಿಷಯದ ಪದ್ಯಗಳನ್ನೂ ಹೇಗೆ ಹಾಡಬೇಕೆಂಬುದನ್ನು ಯೂ ಟ್ಯೂಬ್ ಸಹಾಯದಿಂದ ಕಲಿತುಕೊಂಡಿದ್ದೇನೆ. ಅಲ್ಲದೆ ಕಥಾ ರೂಪದ ಪಾಠಗಳೂ ಸಹಿತ ಸಿನಿಮೀಯ ವೀಡಿಯೋಗಳನ್ನು ನೋಡಿ ಮಕ್ಕಳಿಗೆ ತೋರಿಸಬೇಕೆಂದು ಪಟ್ಟಿ ಮಾಡಿಕೊಂಡಿದ್ದೇನೆ.
ಇಂಗ್ಲೀಷ್ ವಿಷಯದಲ್ಲೂ ಬರುವ ಕಥೆಗಳನ್ನು ನೋಡಿ, ಮಕ್ಕಳಿಗೆ ಪೂರಕವಾಗುವ ಕಥೆಗಳ ಹೆಸರುಗಳನ್ನು ಪಟ್ಟಿ ಮಾಡಿಟ್ಟುಕೊಳ್ಳಲಾಗಿದೆ. ಮತ್ತು ವಿವಿಧ ಚಾರ್ಟಗಳನ್ನೂ ಈ ಸಮಯದಲ್ಲಿ ಸಿದ್ಧಪಡಿಸಿಟ್ಟುಕೊಂಡಿದ್ದು ಮುಂದೆ ಪಾಠ ಬೋಧನೆಯಲ್ಲಿ ಬಳಸಿಕೊಳ್ಳಲಾಗುವುದು.
ದೀಕ್ಷಾ ಆ್ಯಪ್ ನಲ್ಲಿ ಬರುವ ಪಠ್ಯಗಳನ್ನು ವೀಕ್ಷಿಸಿ ವಿಷಯ ಸಾಮರ್ಥವನ್ನೂ ಹೆಚ್ಚಿಸಿಕೊಳ್ಳಲಾಗಿದೆ. ವಿಷಯ ವಸ್ತುವನ್ನು ಬೋಧಿಸುವ ವಿಧಾನ ವೀಡಿಯೋ ಮೂಲಕ ಹೇಗೆ ಮಕ್ಕಳಿಗೆ ಮನದಟ್ಟಾಗುವಂತೆ ಮಾಡಬಹುದೆಂಬುದನ್ನು ತಿಳಿಯಲಾಯಿತು. ಜೊತೆಗೆ ಮಕ್ಕಳಿಗೆ ಲಿಂಕ್ ಅನ್ನು ಶಾಲೆಯ ವಾಟ್ಸಪ್ ಗ್ರೂಪ್ ನಲ್ಲಿ ಕಳಿಸಿ ನೋಡುವಂತೆ ಪ್ರೇರೇಪಿಸಿದ್ದೇನೆ. ಹೀಗೆ ಹಲವಾರು ವೀಡಿಯೋ ಪಾಠಗಳನ್ನು ಯೂ ಟ್ಯೂಬ್
ನಲ್ಲಿ ವೀಕ್ಷಿಸಿ ಭಾಷಾ ವ್ಯಾಕರಣವನ್ನೂ ಹೆಚ್ಚು ತಿಳಿದುಕೊಳ್ಳಲಾಯಿತು.
ಮಕ್ಕಳಿಗೆ ಆಡಿಸಬಹುದಾದ ಆಟಗಳು, ಅದರಿಂದ ಬೆಳೆಯಬಹುದಾದ ನಾಯಕತ್ವ, ಜವಾಬ್ದಾರಿಗಳನ್ನು ತಿಳಿಯಲಾಗಿದೆ. ಮಕ್ಕಳಿಗೆ ತಲುಪಿಸುವ ಕಾರ್ಯ ಮುಂದೆ ಮಾಡಬೇಕಿದೆ.
ಶಿಕ್ಷಣ ಕೇವಲ ಪಠ್ಯಕ್ಕೆ, ಬುದ್ಧಿ ಬೆಳವಣಿಗೆಗೆ ಹಣ ಸಂಪಾದನೆಗೆ ನಿಲ್ಲಬಾರದು. ಶಿಕ್ಷಣ ಬದುಕಿಗೂ ಪೂರಕವಾಗುವಂತೆ ಮಾಡಬೇಕಿರುವುದು ಪ್ರತೀ ಶಿಕ್ಷಕನ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಮಕ್ಕಳಲ್ಲಿ ಬೆಳೆಸಬೇಕಾದ ಸಾಮಾಜಿಕ ಮೌಲ್ಯಗಳು ಕುರಿತಾಗಿಯೂ ಚಿಂತಿಸಿ, ಮೌಲ್ಯಗಳನ್ನು ಮೂಡಿಸಲು ಉಪಯುಕ್ತವಾದ ಕಥೆಗಳ ವೀಡಿಯೋಗಳನ್ನು ವೀಕ್ಷಿಸಲಾಯಿತು.
ಹೀಗೆ ಮನೆಯಿಂದಲೇ ಕೆಲಸದಡಿಯಲ್ಲಿ ತಂತ್ರಜ್ಞಾನವನ್ನು, ಪುಸ್ತಕಗಳನ್ನು ಬಳಸಿಕೊಂಡು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಲಾಯಿತು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ